ಕಮಲಾದೇವಿ, ಚಟ್ಟೋಪಾಧ್ಯಾಯ : 1903-88.  ಭಾರತ ಸ್ವಾತಂತ್ರ್ಯ ಹೋರಾಟಗಾರ್ತಿಯರಲ್ಲೊಬ್ಬರು. ಕಲಾಬಿse್ಞೆ, ಸಾಮಾಜಿಕ ಕಾರ್ಯಕರ್ತೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1903 ಏಪ್ರಿಲ್ 3ರಂದು ಜನಿಸಿದರು. ಇವರ ತಂದೆ ಮದರಾಸು ಸಿವಿಲ್ ಸರ್ವಿಸಿನಲ್ಲಿ  ಉನ್ನತ ದರ್ಜೆಯ ಅದಿsಕಾರಿಯಾಗಿದ್ದರು. ಕಮಲಾದೇವಿ ಮಂಗಳೂರಿನ ಕೆಥೊಲಿಕ್ ಕಾನ್ವೆಂಟ್ ಮತ್ತು ಸೇಂಟ್ ಮೇರೀಸ್ ಕಾಲೇಜಿನಲ್ಲೂ ಆಮೇಲೆ ಲಂಡನ್ನಿನ ಬೆಡ್ಫರ್ಡ್ ಕಾಲೇಜು ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲೂ ವಿದ್ಯಾಭ್ಯಾಸ ಮಾಡಿದರು. 

ಬಾಲ್ಯದಲ್ಲೆ ಇವರ ವಿವಾಹವಾಗಿದ್ದೂ ಶಾಲಾ ವಿದ್ಯಾರ್ಥಿನಿಯಾಗಿದ್ದಾಗಲೇ ಇವರಿಗೆ ವೈಧವ್ಯ ಪ್ರಾಪ್ತವಾಯಿತು. ಆಗ ಇವರು ಹಳೆಯ ಕಂದಾಚಾರವನ್ನು ಮುರಿದು, ತಾವು ಒಪ್ಪಿದ ಹರೀಂದ್ರನಾಥ ಚಟ್ಟೋಪಾಧ್ಯಾಯರನ್ನು ಮದುವೆಯಾದರು. ಪತಿಯೊಂದಿಗೆ ಯುರೋಪಿನಲ್ಲಿ ಪ್ರವಾಸಮಾಡಿ ಕಲಾವಿದರನ್ನು ಸಂದರ್ಶಿಸುತ್ತ ರಂಗಭೂಮಿಯ ಅಧ್ಯಯನ ಮಾಡಿದರು. ಅದರ ಪ್ರಯೋಗತಂತ್ರವನ್ನು ಕಲಿತರು. ಭಾರತಕ್ಕೆ ಮರಳಿದ ಮೇಲೆ ತಾವೇ ಮುಖ್ಯಪಾತ್ರಗಳನ್ನು ವಹಿಸಿ, ಕಲಾತ್ಮಕ ನಾಟಕಗಳನ್ನು ರಂಗಭೂಮಿಯ ಮೇಲೆ ತರಲು ತಮ್ಮ ಪತಿಯೊಂದಿಗೆ ಶ್ರಮಿಸಿದರು.

ಗಾಂಧೀಜಿ, ಜವಹರಲಾಲ್ ನೆಹರೂ, ಸರೋಜಿನಿ ನಾಯ್ಡು, ಕಸ್ತೂರ ಬಾ -ಇವರ ಪ್ರಭಾವ ಕಮಲಾದೇವಿಯ ಮೇಲೆ ವಿಶೇಷವಾಗಿ ಆಯಿತು. ಓದುತ್ತಿದ್ದಾಗಲೇ ಇವರು ಕಾಲೇಜು ವಿದ್ಯಾಭ್ಯಾಸ ತೊರೆದು ಅಸಹಕಾರ ಚಳವಳಿಯಲ್ಲಿ ದುಮುಕಿದರು. ಯರವಾಡಾ, ಬೆಳಗಾಂವಿ ಮತ್ತು ವೆಲ್ಲೂರುಗಳಲ್ಲಿ ಜೈಲು ಶಿಕ್ಷೆ ಅನುಭವಿಸಿದರು. ಅನಂತರವೂ ಅನೇಕ ಸಾರಿ ಸೆರೆಮನೆ ಶಿಕ್ಷೆಗೆ ಗುರಿಯಾದರು. ಕರ್ನಾಟಕದ ಯುವಕರಲ್ಲಿ ರಾಷ್ಟ್ರಸೇವೆಯ ಜಾಗೃತಿ ಉಂಟುಮಾಡುವುದರಲ್ಲಿ ಇವರ ಪಾತ್ರ ಹಿರಿದು. ಕೃಷಿಕರ ಸಮಸ್ಯೆಗಳ ಪರಿಹಾರದಿಂದಲೇ ಜನತೆಯ ಉದ್ಧಾರ ಸಾಧ್ಯವೆಂದು ನಂಬಿ ಇವರು ಕೃಷಿ ಕ್ಷೇತ್ರದಲ್ಲಿ ತೀವ್ರ ಆಸಕ್ತಿ ತಳೆದರು. ಜಮೀನುದಾರಿ ಪದ್ಧತಿ ರದ್ದಾಗಿ ಭೂಮಿ ಸಮಾನವಾಗಿ, ನ್ಯಾಯಸಮ್ಮತವಾಗಿ ಹಂಚಿಕೆಯಾಗಬೇಕೆಂಬುದು ಇವರ ಆಶಯವಾಗಿತ್ತು. ಕಾಂಗ್ರೆಸ್ಸಿನ ಭೂ ಸುಧಾರಣೆಯ ಕ್ರಮಗಳು ಇವರಿಗೆ ಸಮರ್ಪಕವೆನಿಸಲಿಲ್ಲ.

ಕಮಲಾದೇವಿಯವರು 1948ರಲ್ಲಿ ಕಾಂಗ್ರೆಸ್ ಸಮಾಜವಾದಿ ಪಕ್ಷವನ್ನು ಸೇರಿದರು. ಬಡತನದ ವಿರುದ್ಧ ಘೂೕಷಣೆಗಳನ್ನು ಕೂಗುವುದಕ್ಕಿಂತ ಸುಖಮಯ ಮಾನವ ಸಂಬಂಧಗಳಿಗಾಗಿ ಕ್ರಿಯಾ ಶೀಲವಾದ  ಕಳಕಳಿಯೇ ಸಮಾಜವಾದದ ಸತ್ತ್ವವೆಂಬುದು ಇವರ ನಂಬಿಕೆ.  ಬ್ರಿಟಿಷ್ಸಾಮ್ರಾಜ್ಯ ಶಾಹಿಯ ವಿರುದ್ಧ ಹೋರಾಡುವುದಕ್ಕಾಗಿ ಕಾಂಗ್ರೆಸ್ಸನ್ನು ಬಲಪಡಿಸುವ ಕರೆ ಕೊಟ್ಟ ಇವರು ಸಮಾಜವಾದದ ಧ್ಯೇಯ ನಿರೂಪಣೆಯಿಂದ ಒಮ್ಮೆಲೆ ಭಾರತದ ಮುಂಚೂಣಿ ನಾಯಕರ ಮಟ್ಟಕ್ಕೇರಿದರು. ಕಾರ್ಮಿಕರ ಹಿತರಕ್ಷಣೆಗಾಗಿ ಕಾರ್ಮಿಕ ಸಂಸ್ಥೆಗಳಲ್ಲಿ ಸಂಘಟನೆಗೂ ಚಳವಳಿಗೂ ನಾಯಕತ್ವ ನೀಡಿ ಉತ್ತೇಜನ ನೀಡಿದರು.

ಭಾರತದ ಮಹಿಳಾ ಆಂದೋಲನದ ಪ್ರಮುಖ ಮುಂದಾಳಾಗಿ  ದೇಶಾದ್ಯಂತ ಸಂಚರಿಸಿ, ಭಾಷಣಗಳಿಂದ, ಸಂದರ್ಶನಗಳಿಂದ ಸ್ಫೂರ್ತಿ ನೀಡಿ, ಅಖಿಲ ಭಾರತ ಮಹಿಳಾ ಸಮ್ಮೇಳನವನ್ನು ಬೆಳೆಸಿದರು. ಬಿಳಿಯ ಒರಟು ಖಾದಿಗೆ ಕಲಾತ್ಮಕತೆ ತಂದುಕೊಟ್ಟು, ಅರಿವೆಗೆ ಬಣ್ಣ ಹಾಕುವ ಭಾರತೀಯ ಕಲೆಗೆ ಸ್ಫೂರ್ತಿ ನೀಡಿದರು. ಅಖಿಲ ಭಾರತ ಕಾಂಗ್ರೆಸ್ ಸಮಿತಿ ಹಾಗೂ ಕಾರ್ಯಕಾರಿ ಸಮಿತಿಯ, ಅಖಿಲ ಭಾರತ ಮಹಿಳಾ ಸಮ್ಮೇಳನದ ಸಂಘಟನಾ ಕಾರ್ಯದರ್ಶಿತ್ವ, ಉಪಾಧ್ಯಕ್ಷತೆ ಮತ್ತು ಅಧ್ಯಕ್ಷತೆ, ಭಾರತೀಯ ಸಹಕಾರ ಯೂನಿಯನ್ನಿನ ಅಧ್ಯಕ್ಷತೆ, ವಲ್ರ್ಡ್‌ ಕ್ರಾಫ್ಟ್‌ ಕೌನ್ಸಿಲ್ನ ಉಪಾಧ್ಯಕ್ಷತೆ, ಅಖಿಲ ಭಾರತ ಕರಕುಶಲ ಮಂಡಳಿಯ ಅಧ್ಯಕ್ಷತೆ, ಅಖಿಲ ಭಾರತ ಡಿಸೈನ್ ಸೆಂಟರಿನ ಅಧ್ಯಕ್ಷತೆ-ಇವು ಕಮಲಾದೇವಿಯವರು ನಿರ್ವಹಿಸಿದ ಕೆಲವು ಅದಿsಕಾರಗಳು. ಇವರು ಅಂತಾರಾಷ್ಟ್ರೀಯ ರಂಗಭೂಮಿ ಸಂಸ್ಥೆಯ ವತಿಯಿಂದ ಭಾರತ ರಾಷ್ಟ್ರೀಯ ರಂಗಭೂಮಿ ಕೇಂದ್ರದ ಸಂಸ್ಥಾಪಕರಾಗಿದ್ದರು.

ಇವರು ಇಂಗ್ಲಿಷಿನಲ್ಲಿ ಹತ್ತು ಪುಸ್ತಕಗಳನ್ನು ಬರೆದಿದ್ದಾರೆ: ಭಾರತೀಯ ಕರ ಕುಶಲ ಕೈಗಾರಿಕೆಗಳು, ಭಾರತೀಯ ಕಂಬಳಿಗಳು ಮತ್ತು ನೆಲಾವರಣಗಳು, ಸಮಾಜವಾದ ಮತ್ತು ಸಮಾಜ, ಭಾರತೀಯ ಮಹಿಳಾ ಜಾಗೃತಿ, ರಾಷ್ಟ್ರೀಯ ರಂಗಭೂಮಿ ಮುಂತಾದವು ಇವರ ವೈವಿಧ್ಯಪುರ್ಣ ಆಸಕ್ತಿಯನ್ನು ಪ್ರತಿ ಫಲಿಸುತ್ತವೆ. ಸಾಮಾಜಿಕ ಧುರೀಣತ್ವಕ್ಕಾಗಿ ವಾಟ್ಟುಮಲ್ (1962) ಮತ್ತು ಮ್ಯಾಗ್ಸೇಸೇ (1966) ಪ್ರಶಸ್ತಿಗಳನ್ನುಗಳಿಸಿದರು. 1970ರಲ್ಲಿ ಶಾಂತಿ ನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯದಿಂದ ಇವರಿಗೆ ದೇಶಿಕೋತ್ತಮಾ ಎಂಬ ಪ್ರಶಸ್ತಿ ದತ್ತವಾಯಿತು. ಭಾರತ ಸರ್ಕಾರ ಇವರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ಇವರು 1988ರಲ್ಲಿ ನಿಧನರಾದರು.	(ಜೆ.ಆರ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ